ಗ್ರೋಟ್ ಜಾರ್ಜ್

	1794-1871. ಗ್ರೀಸ್ ದೇಶದ ಇತಿಹಾಸವನ್ನು 12 ಸಂಪುಟಗಳಲ್ಲಿ ಬರೆದು ಪ್ರಕಟಿಸಿದ ಇಂಗ್ಲಿಷ್ ಇತಿಹಾಸಕಾರ, 1794ರ ನವೆಂಬರ್ 17ರಂದು ಜನಿಸಿದ. ಈತನ ಪೂರ್ವಿಕರು ಜರ್ಮನರು, ಇವನ ತಂದೆ ಖಾಸಗಿ ಬ್ಯಾಂಕ್ ಒಂದನ್ನು ನಡೆಸುತ್ತಿದ್ದ. ಹದಿನಾರೆನೆಯ ವಯಸ್ಸಿನಲ್ಲಿ ತನ್ನ ತಂದೆಯ ಸಂಸ್ಥೆಯೊಂದನ್ನು ಸೇರಿದ ಜಾರ್ಜ್ ಗ್ರೊಟನಿಗೆ ವಿಶ್ವವಿದ್ಯಾಲಯ ಶಿಕ್ಷಣ ದೊರೆತಿಲಿಲ್ಲವಾದರೂ ಪ್ರಾಚೀನ ಗ್ರೀಕ್ ಸಾಹಿತ್ಯ, ಸಂಸ್ಕ್ರತಿ, ಕಲೆಗಳು, ಅಧ್ಯಾತ್ಮಶಾಸ್ತ್ರ, ರಾಜಕೀಯ ಅರ್ಥಶಾಸ್ತ್ರ-ಇವು ಈತನ ಒಲವಿನ ವಿಷಯಗಳಾಗಿದ್ದುವು. ಇವಕ್ಕೆ ಸಂಬಂಧಿಸಿದ ಅನೇಕ ಗ್ರಂಥಗಳನ್ನು ಈತ ಅಧ್ಯಯನ ಮಾಡಿದ ತತ್ತ್ವಶಾಸ್ತ್ರಜ್ಞ ಜೇಮ್ಸ್ ಮಿಲ್ಲನ ಸ್ನೇಹ ಇವನಿಗೆ ಲಭಿಸಿತು. ಅವನ್ನೂ ಜೇರಮಿ ಬೆಂಥಮನನ್ನೂ ಈತ ಗುರುಗಳಂತೆ ಭಾವಿಸಿದ.

	ಲಂಡನ್ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಯೋಜನೆಯಲ್ಲಿ ಈತ ಆಸಕ್ತಿವಹಿಸಿದ್ದ 1827ರಿಂದ 1830ರವರೆಗೆ ಆ ಸಂಸ್ಥೆಯ ಮಂಡಲಿಯ ಸದಸ್ಯನಾಗಿದ್ದ ಜೆ.ಎಸ್.ಮಿಲ್ಲನೊಂದಿಗೆ ಈತನಿಗೆ ಭಿನ್ನಾಭಿಪ್ರಾಯ ಬಂದದ್ದರಿಂದ ಆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ 1832ರಿಂದ 1841ರ ವರೆಗೆ ಜಾರ್ಜ ಗ್ರೋಟ್ ಲಂಡನ್ ನಗರದಿಂದ ಪಾರ್ಲಿಮೆಂಟ್ ಸದಸ್ಯನಾಗಿದ್ದ. 1841ರಲ್ಲಿ ರಾಜಕೀಯದಿಂದ ನಿವೃತ್ತನಾದ. ಮತ್ತೆ ಇತಿಹಾಸ ರಚನೆಯಲ್ಲಿ ನಿರತವಾದ. ಗ್ರೀಕ್ ಇತಿಹಾಸದ ಹನ್ನೆರಡು ಸಂಪುಟಗಳು 1846ರಿಂದ 1856ರ ವರೆಗಿನ ಕಾಲದಲ್ಲಿ ಪ್ರಕಟವಾದುವು. ಕ್ರಿ.ಪೂ.301ರ ವರೆಗಿನ ಇತಿಹಾಸವದು. ಈ ನಡುವೆ ಮತ್ತೆ ಈತ ವಿಶ್ವವಿದ್ಯಾಲಯದ ಕೋಶಾಧಿಕಾರಿಯೂ 1868ರಲ್ಲಿ ಅದರ ಅಧ್ಯಕ್ಷನೂ ಆದ. ಅಲ್ಲದೆ 1862ರಿಂದ ತನ್ನ ಜೀವನದ ಕೊನೆಯ ವರೆಗೂ ಕುಲಪತಿಯಾಗಿದ್ದ. ಈತನ ಮರಣಾನಂತರ ಇವನ ವೈಯಕ್ತಿಕ ಗ್ರಂಥಾಲಯ ಆ ವಿಶ್ವವಿದ್ಯಾಲಯಕ್ಕೆ ಬಳುವಳಿಯಾಗಿ ಸೇರಿತು. ಮಾನಸಿಕ ತತ್ತ್ವಶಾಸ್ತ್ರದ ಅಧ್ಯಯನಕ್ಕಾಗಿ ಇತ 6,000 ಪೌಂಡಗಳ ದತ್ತಿ ಬಿಟ್ಟ. ಈತ ರಾಯಲ್ ಸೊಸೈಟಿಯ ಸದಸ್ಯನಾಗಿದ್ದ. ಆಕ್ಸಫರ್ಡ್ ವಿಶ್ವವಿದ್ಯಾಲಯ ಎಲ್.ಎಲ್.ಡಿ. ಪದವಿಯನ್ನೂ ನೀಡಿ ಗೌರವಿಸಿದುವು. ಜಾರ್ಜ್‍ಗ್ರೋಟನಿಗೆ ಕೀರ್ತಿ ಬಂದದ್ದು ಗ್ರೀಸಿನ ಇತಿಹಾಸ ಕುರಿತ ಗ್ರಂಥದಿಂದ. ಮೂಲತಃ ರಾಜಕಾರಣಿಯೂ ವ್ಯವಹಾರಚತುರನೂ ಆದ ಇತ ಪ್ರಜಾಪ್ರಭುತ್ವವಾದಕ್ಕೆ ವಿರುದ್ಥವಾಗುವಂತೆ ಗ್ರೀಸ್ ದೇಶದ ಚರಿತ್ರೆಯನ್ನು ನಿರೂಪಿಸಿದ ಮಿಟ್‍ಫರ್ಡನ ಬರಹವನ್ನು ಖಂಡಿಸುವ ಸಲುವಾಗಿಯೇ ಎಂಬಂತೆ ಈ ಕಾರ್ಯವನ್ನು ಕೈಗೊಂಡ. ಗ್ರೀಸಿನ ಪೌರಾಣಿಕ ಕಥೆಗಳಿಂದ ಆರಂಭವಾಗಿ ಅಲೆಗ್ಸಾಂಡರನ ದಂಡಯಾತ್ರೆಯ ವರೆಗೂ, ಅಂದರೆ ಕ್ರಿ.ಪೂ 4ನೆಯ ಶತಮಾನದವರೆಗೂ ಗ್ರೀಸಿನ ಇತಿಹಾಸವನ್ನೂ ಈತ ನಿರೂಪಿಸಿದ್ದಾನೆ. ಇದು ಇಂದು ಉತ್ಕ್ರಷ್ಟ ಇತಿಹಾಸಗ್ರಂಥವೆನಿಸದಿದ್ದರೂ ವಸ್ತು ಸಂಗ್ರಹಣೆ ಮುಂತಾದವುಗಳಲ್ಲಿ ಈತನ ನೈಪುಣ್ಯವನ್ನು ಇದರಲ್ಲಿ ಕಾಣಬಹದು. ಪ್ಲೇಟೊ ಅಂಡ್ ಅದರ್ ಕಂಪ್ಯಾನಿಯನ್ಸ್ ಆಫ್ ಸಾಕ್ರಟೀಸ್ ಎಂಬ ಮೂರು ಸಂಪುಟಗಳ ಗ್ರಂಥ 1865ರಲ್ಲಿ ಹೊರಬಿತ್ತು. ಬಳಿಕ ಈತ ಅರಿಸ್ಟಾಟಲನ್ನು ಕುರಿತು ಬರೆಯತೊಡಗಿದ. ಆದರೆ ಈ ಕೃತಿ ಸಂಪೂರ್ಣವಾಗಲಿಲ್ಲ. 1871ರಲ್ಲಿ ಈತ ಮರಣಹೊಂದಿದ. 1872ರಲ್ಲಿ ಇದನ್ನು ಬೇನ್ ಮತ್ತು ದರಾಬಟ್ರ್ಸನ್ ಸಂಪಾದಿಸಿ ಪ್ರಕಟಿಸಿದರು. ಸ್ಟೇಟ್‍ಮೆಂಟ್ ಆನ್ ದಿ ಕ್ವೆಶ್ಚನ್ ಆಫ್ ಪಾರ್ಲಿಮೆಂಟರಿ ರಿಫಾರ್ಮ್ (1821), ಎಸೆನ್ಷಿಯಲ್ ಆಫ್ ಪಾರ್ಲಿಮೆಂಟರಿ ರಿಫಾರ್ಮ್ (1831), ಸೆವೆನ್ ಲೆಟರ್ಸ ಆನ್ ದಿ ರೀಸೆಂಟ್ ಪಾಲಿಟಿಕ್ಸ್ ಆಫ್ ಸ್ವಿಟ್‍ಜûರ್ಲೆಂಡ್ (1847) ಇವು ಈತನ ಇತರ ಕೆಲವು ಕೃತಿಗಳು.			   (ಜೆ.ಬಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ